ಈ ಜನ್ಮದ ಉದ್ದೇಶ ತಿಳಿಸುವ ಭೃಗು ಬಿಂದು

ನಮ್ಮ ಜನ್ಮಕ್ಕೆ ಒಂದು ಕಾರಣ ಅಥವಾ ಉದ್ದೇಶ ಇರುತ್ತದೆ. ಭಗವಂತನ ಲೋಕ ವ್ಯವಹಾರವು ವ್ಯವಸ್ಥಿತವಾಗಿ ನಡೆಯಲು ನಮ್ಮದೊಂದು ಚಿಕ್ಕ ಪಾತ್ರ ಅಗತ್ಯವಿರುತ್ತದೆ. ಆ ಪಾತ್ರಕ್ಕೆ ಅನುಗುಣವಾಗಿ ಕುಲ ದೇವರು, ತಂದೆ-ತಾಯಿ, ಸಹೋದರರು, ಬಂಧು-ಬಳಗ,ಊರು, ಸಂಪತ್ತು, ಬಡತನ, ಸಂತಾನ, ಅರೋಗ್ಯ-ಅನಾರೋಗ್ಯ ಇತ್ಯಾದಿ. ಒಂದು ದಿನ, ನಿಗದಿತ ಸ್ಥಳದಲ್ಲಿ ಜನಿಸಿರುವ ನಾವು ಇದ್ಯಾವುದನ್ನು ಆಯ್ಕೆಮಾಡಿಕೊಂಡು ಹುಟ್ಟಿಲ್ಲ, ಆದರೆ ವಿದ್ಯೆ, ಉದ್ಯೋಗ, ಸಂಗಾತಿ, ಮನೆ, ಸ್ನೇಹಿತರು, ಇತ್ಯಾದಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಅಂದುಕೊಂಡಿದ್ದರೂ ಕೂಡ ಅದು ನಮ್ಮ ಪೂರ್ವ ಜನ್ಮದ ಕರ್ಮದ ಫಲವಾಗಿ ಭಗವಂತ ಕೊಟ್ಟ ಬಳುವಳಿಯೇ ಆಗಿರುತ್ತದೆ. ಜಾತಕವನ್ನು ವಿಶ್ಲೇಷಿಸಿದಾಗ ಎಲ್ಲವು ಪೂರ್ವನಿರ್ಧಾರಿತ ಎಂಬುದು ತಿಳಿದು ಬರುತ್ತದೆ; ಅಂದರೆ ಎಲ್ಲದಕ್ಕೂ ಯೋಗ ಬೇಕು, ಯೋಗ ಎಂದರೆ ಗ್ರಹಗಳ ಸಂಯೋಗ, ಸ್ಥಿತಿ, ದೃಷ್ಟಿ ಮತ್ತು ನಕ್ಷತ್ರ ಪ್ರಭಾವಗಳು, ಇವು  ಮಾನವ ಜೀವನವನ್ನು ನಿರ್ಧರಿಸುತ್ತವೆ;  ಯೋಗಗಳಲ್ಲಿ ಶುಭ ಮತ್ತು ದುರ್ಯೋಗಗಳು ಇರುತ್ತವೆ.

ಜಾತಕದಲ್ಲಿ ರಾಹು ಮತ್ತು ಚಂದ್ರನ ನಡುವಿನ ಕಾಲ್ಪನಿಕ ಮಧ್ಯ ಬಿಂದುವನ್ನು ಭೃಗು ಬಿಂದು ಎಂದು ಕರೆಯುವರು ಇದನ್ನು ನಾಡೀ  ಜ್ಯೋತಿಷ್ಯ ಗ್ರಂಥವಾದ ‘ಭೃಗು ನಂದಿ ನಾಡೀ’ ಯಲ್ಲಿ ತಿಳಿಸಲಾಗಿದೆ. ರಾಹು ಹಿಂದಿನ ಜನ್ಮವನ್ನು ಸೂಚಿಸಿದರೆ ಚಂದ್ರನು ತಾಯಿ ಅಥವಾ ತಾಯಿಯ ಗರ್ಭವನ್ನು ಸಂಕೇತಿಸುತ್ತಾನೆ, ಈ ಎರಡು ಗ್ರಹಗಳ ಮಧ್ಯಬಿಂದುವು ಯಾವ ನಕ್ಷತ್ರ ಪಾದದಲ್ಲಿ  ಬೀಳುತ್ತದೋ  ಅದು ಭೃಗು ಬಿಂದು ಆಗಿರುತ್ತದೆ. ಇದು ಅನನ್ಯವಾದ ಬಿಂದು ಆಗಿದ್ದು ಈ ಜನ್ಮದಲ್ಲಿ ಮಾಡಬೇಕಾದ ಹಿಂದಿನ ಬಾಕಿ ಕರ್ಮವನ್ನು ತೋರಿಸುತ್ತದೆ.

ಭೃಗು ಬಿಂದು ಇರುವ ರಾಶಿ,  ಭೃಗು ಬಿಂದು ಇರುವ ರಾಶಿಯ ಅಧಿಪತಿ ಮತ್ತು ನಕ್ಷತ್ರ ಅಧಿಪತಿ ಇರುವ ಮನೆ ಅಲ್ಲದೆ ಭೃಗು ಬಿಂದುವನ್ನು ದೃಷ್ಟಿಸುವ ಗ್ರಹಗಳು, ಭೃಗು ಬಿಂದುವಿನಲ್ಲಿ ಸ್ಥಿತ ಗ್ರಹ  ಆ ಜಾತಕನ ಜೀವನದ ಗುರಿ, ಕನಸು, ಮಹತ್ವಾಕಾಂಕ್ಷೆ, ಜೀವನದ ಮಾರ್ಗ ಅಥವಾ ವೃತ್ತಿಯನ್ನು ಸೂಚಿಸುತ್ತದೆ.

ಭೃಗು ಬಿಂದು ಕ್ರಿಯಾಶೀಲವಾದಾಗ ಅಥವಾ ಆ ಬಿಂದುವಿನ ಮೇಲೆ ಗೋಚಾರದ ಗ್ರಹಗಳು ಪರಿಭ್ರಮಣ ಮಾಡಿದಾಗ ಅಥವಾ ತಮ್ಮ ದೃಷ್ಟಿಯನ್ನು ಬೀರಿದಾಗ ಜಾತಕನ ಗುರಿಯ ಮಾರ್ಗಕ್ಕೆ ಬೆಳಕು ಚೆಲ್ಲಬಹುದು, ಮನಸಿನ ಮೂಲೆಯಲ್ಲಿ ಸುಪ್ತವಾಗಿದ್ದ ಕನಸುಗಳು ಗರಿಗೆದರಬಹುದು, ಸಾಧನೆಯತ್ತ ಮುಖ ಮಾಡಲು ಪ್ರೇರೇಪಿಸಬಹುದು ಇಲ್ಲವೇ ಅನುಕೂಲ ಮಾಡಿ ಕೊಡಬಹುದು.

ಭೃಗು ಬಿಂದುವನ್ನು ಕಂಡು ಹಿಡಿಯುವ ವಿಧಾನ: ಜನ್ಮ ಕುಂಡಲಿಯಲ್ಲಿ ಚಂದ್ರ ಸ್ಪುಟದಿಂದ ರಾಹು ಸ್ಪುಟವನ್ನು ಕಳೆದು ಎರಡರಿಂದ ಭಾಗಿಸಿ, ಬಂದ ಭಾಗಲಬ್ಧಕ್ಕೆ ರಾಹು ಸ್ಪುಟವನ್ನು ಕೂಡಿಸಿದಾಗ ಬರುವ ನಕ್ಷತ್ರ ಪಾದವೇ ಭೃಗು ಬಿಂದು.

ಈ ಬಿಂದುವು ಕೇಂದ್ರ, ತ್ರಿಕೋಣಗಳಲ್ಲಿ ಶುಭ ಫಲವನ್ನೂ, ದುಸ್ಥಾನಗಳಲ್ಲಿ ಅಶುಭ ಫಲವನ್ನೂ ಕೊಡುತ್ತದೆ. ಲಗ್ನಾಧಿಪತಿ, ಯೋಗಕಾರಕರು, ನ್ಯೆಸರ್ಗಿಕ ಶುಭ ಗ್ರಹಗಳು ಗೋಚಾರದಲ್ಲಿ ಈ ಬಿಂದುವನ್ನು ಸಂಧಿಸಿದಾಗ ಅಥವಾ ದೃಷ್ಟಿ ಬೀರಿದಾಗ ಶುಭಫಲವನ್ನೂ, ಪಾಪ ಗ್ರಹಗಳು ಅಥವಾ ಮಾರಕರು ಅಶುಭ ಫಲವನ್ನೂ ನೀಡುತ್ತಾರೆ  ಉದಾಹರಣೆಗೆ:

ಗುರು: ನ್ಯೆಸರ್ಗಿಕ ಶುಭ ಗ್ರಹವಾದ ಗುರುವು ಭೃಗು ಬಿಂದುವಿನ ಮೇಲೆ ಸಂಚಾರ ಮಾಡುವಾಗ ಸಾಮಾನ್ಯವಾಗಿ ವಿದ್ಯೆ, ಉದ್ಯೋಗ ಅಭಿವೃದ್ಧಿ, ವಿವಾಹ, ಸಂತಾನ,ವ್ಯವಹಾರದಲ್ಲಿ ಲಾಭ, ತೀರ್ಥಯಾತ್ರೆ, ಆಧ್ಯಾತ್ಮ, ಬಯಕೆಗಳ ಈಡೇರಿಕೆ, ಆರೋಗ್ಯ ಚೇತರಿಕೆ ಇತ್ಯಾದಿ.

ರವಿ ಮತ್ತು ಕುಜ: ಪಾಪ ಗ್ರಹಗಳ ಪಟ್ಟಿಗೆ ಸೇರುವ ರವಿ-ಕುಜರು ಭೃಗು ಬಿಂದುವಿನ ಮೇಲೆ ಪರಿಭ್ರಮಣೆ ಮಾಡುವಾಗ ಜಾತಕನಿಗೆ ಸರ್ಕಾರದಿಂದ ತೊಂದರೆ, ಗಾಯ, ಜಗಳ, ಅಪಘಾತ ಅಥವಾ ಅರೋಗ್ಯ ಹಾನಿ ಇತ್ಯಾದಿ ಅಶುಭ ಫಲಗಳು ಸಂಭವಿಸುತ್ತವೆ

ಬುಧ ಮತ್ತು ಶುಕ್ರ: ಮಿತ್ರರ ಅಥವಾ ಪ್ರೇಯಸಿ ಭೇಟಿ, ಆದಾಯಗಳಿಕೆ, ಉತ್ಸವ , ಶುಭಕಾರ್ಯ, ಸುಖ ದಾಂಪತ್ಯ ಇತ್ಯಾದಿ.

ಶನಿ: ನ್ಯೆಸರ್ಗಿಕ ಅಶುಭ ಗ್ರಹವಾದ ಶನಿಯು ಈ ಬಿಂದುವಿನ ಮೇಲೆ ಚಲಿಸುವಾಗ ಧೀರ್ಘ ಖಾಯಿಲೆ, ದಾಂಪತ್ಯದಲ್ಲಿ ಕಿರಿಕಿರಿ, ಸಂಪತ್ತಿನ ನಷ್ಟ, ಸ್ವತಃ ಅಥವಾ ಸಂಭಂದಿಕರ ಮರಣ, ಕೆಲಸ ಕಾರ್ಯಗಳಲ್ಲಿ ನಿಧಾನ ಇತ್ಯಾದಿ.

ರಾಹು ಮತ್ತು ಕೇತು: ಮಿಶ್ರ ಫಲ, ಸಣ್ಣ ಮಟ್ಟದ ಸಮಸ್ಯೆ ದೊಡ್ಡದಾಗ ಬಹುದು, ವಿಷಜಂತು ಅಥವಾ ವಿಷದಿಂದ ತೊಂದರೆ, ಕಿರುಕುಳ, ಮಾನಸಿಕ ತೊಂದರೆ ಇತ್ಯಾದಿ.

ಮೇಲೆ ತಿಳಿಸಿದ ಫಲಗಳು ಸಾಮಾನ್ಯವಾಗಿದ್ದು , ಜಾತಕವನ್ನು ಸಂಪೂರ್ಣವಾಗಿ ವಿಶ್ಲೇಷಿಸಿದಾಗ ಮಾತ್ರ ನಿಖರ ಫಲವನ್ನೂ ತಿಳಿಯಬಹುದು.

ಜ್ಯೋತಿಷ್ಯ ಅಭ್ಯಾಸ ನಿರತರು  ರಾಹು ಮತ್ತು ಚಂದ್ರನ ನಡುವಿನ ಮಧ್ಯಬಿಂದುವಲ್ಲದೆ ಪ್ರತಿ ಗ್ರಹದ ನಡುವಿನ ಅಂತರ ಮತ್ತು ಮಧ್ಯ ಬಿಂದುವನ್ನು ಕಂಡು ಹಿಡಿದು, ಜಾತಕನ ಮೇಲೆ ಆಗುವ ಅದರ ಪ್ರಭಾವವನ್ನು  ಅಥವಾ ಬದಲಾವಣೆಗಳನ್ನು ಗಮನಿಸುವುದರಿಂದ ಅಥವಾ ಈ ಕುರಿತು ಸಂಶೋಧನೆಗಳನ್ನು ನಡೆಸುವುದರಿಂದ ಮಾನವನ ಭವಿಷ್ಯವನ್ನು ನಿಖರವಾಗಿ ತಿಳಿಸಬಹುದು ಎನ್ನುವುದು ನನ್ನ ಅಭಿಪ್ರಾಯ.

Spread the love

Leave a Reply

Your email address will not be published. Required fields are marked *

CommentLuv badge